ಇಲ್ಬರ್ಟ್ ವಿಧೇಯಕ-
 	ಭಾರತದಲ್ಲಿದ್ದ ಯೂರೋಪಿಯನ್ ಬ್ರಿಟಿಷ್ ಪ್ರಜೆಗಳ ಮೇಲಣ ಆಪಾದನೆಯ ವಿಚಾರಣೆಗಳನ್ನು ಬಿಳಿಯ ನ್ಯಾಯಾಧೀಶರೇ ನಡೆಸತಕ್ಕದ್ದೆಂದಿದ್ದ ಪಕ್ಷಪಾತದ ವಿನಾಯಿತಿಯನ್ನು ಹಿಂತೆಗೆದುಕೊಳ್ಳುವ ಉದ್ದೇಶದಿಂದ ವೈಸ್‍ರಾಯ್ ಸಂಪುಟದಲ್ಲಿ ನ್ಯಾಯಸಚಿವನಾಗಿದ್ದ ಸರ್ ಕೋಟ್ರ್ನಿ ಇಲ್ಬರ್ಟ್ 1883ರಲ್ಲಿ ಮಂಡಿಸಿದ್ದು.

ಭಾರತದ ಲೋಕಸೇವೆಗೆ (ಸಿವಿಲ್ ಸರ್ವಿಸ್) ಅಧಿಕಾರಿಗಳನ್ನು ನೇಮಿಸಲು ಇಂಗ್ಲೆಂಡಿನಲ್ಲಿ ಏರ್ಪಡಿಸಲಾಗಿದ್ದ ಸ್ಪರ್ಧಾಪರೀಕ್ಷೆಗಳಿಗೆ ಕೂರಲು ಭಾರತೀಯ ವಿದ್ಯಾವಂತ ತರುಣರಿಗೂ ಅವಕಾಶ ಕಲ್ಪಿಸಿದ ಫಲವಾಗಿ (ನೋಡಿ- ಇಂಡಿಯನ್-ಸಿವಿಲ್-ಸರ್ವಿಸ್) ಕ್ರಮೇಣ ಅನೇಕ ಭಾರತೀಯರು ಉಚ್ಚವರ್ಗದ ನ್ಯಾಯಾಧೀಶರಾಗಿದ್ದರು. ಇವರಲ್ಲನೇಕರು ಜ್ಯೇಷ್ಠತೆಯ (ಸೀನಿಯಾರಿಟಿ) ಅರ್ಹತೆ ಪಡೆದಿದ್ದಾಗ್ಯೂ ಇವರು ತಮ್ಮ ಮುಂದೆ ವಿಚಾರಣೆಗಾಗಿ ಐರೋಪ್ಯ ಬ್ರಿಟಿಷ್ ಪ್ರಜೆಗಳನ್ನು ಬರಮಾಡಿಕೊಳ್ಳುವ ಹಾಗಿರಲಿಲ್ಲ. ಈ ವ್ಯತಿಕ್ರಮವನ್ನು ಸರಿಪಡಿಸಿ, ಅವರೂ ಭಾರತೀಯ ಜಿಲ್ಲಾ ಹಾಗೂ ಸತ್ರ ನ್ಯಾಯಮೂರ್ತಿಗಳ ಮುಂದೆ ಹಾಜರಾಗುವಂತೆ ದಂಡಪ್ರಕ್ರಿಯಾ ಸಂಹಿತೆಯಲ್ಲಿ ಆವಶ್ಯಕ ತಿದ್ದುಪಡಿ ಮಾಡುವುದೇ ಈ ವಿಧೇಯಕದ ಉದ್ದೇಶ.
ವರ್ಣಭೇದ ನೀತಿಯನ್ನು ನ್ಯಾಯಾಂಗದಿಂದ ತೊಡೆದು ಹಾಕುವ ಈ ಪ್ರಯತ್ನವನ್ನು ಭಾರತೀಯ ಪತ್ರಿಕೆಗಳು ಸ್ವಾಗತಿಸಿದವು. ಇದಕ್ಕೆ ರಾಷ್ಟ್ರಾಭಿಮಾನಿಗಳೆಲ್ಲರ ಬೆಂಬಲ ದೊರಕಿತು.

ಆದರೆ ಭಾರತದಲ್ಲಿದ್ದ ಆಂಗ್ಲ ಸಮುದಾಯಕ್ಕೆ ಬಲು ಅಸಮಾಧಾನವಾಯಿತು. ಈ ವಿಧೇಯಕವನ್ನು ವಿರೋಧಿಸಿ ಅವರು ಭಾರತದಲ್ಲೂ ಇಂಗ್ಲೆಂಡಿನಲ್ಲೂ ಪ್ರಚಂಡ ಚಳವಳಿ ನಡೆಸಿದರು. ತಮ್ಮ ಈ ಹಕ್ಕಿನ ರಕ್ಷಣೆಗಾಗಿ ಸಂಘವೊಂದು ಸ್ಥಾಪಿತವಾಗಿ, ದೇಶಾದ್ಯಂತ ಇದರ ಶಾಖೋಪಶಾಖೆಗಳು ಎದ್ದವು. ಒಂದೂವರೆ ಲಕ್ಷ ರೂಪಾಯಿ ನಿಧಿ ಸಂಗ್ರಹವಾಯಿತು. ಭಾರತದ ವೈಸ್‍ರಾಯಿಗೂ ಬ್ರಿಟನ್ನಿನಲ್ಲಿದ್ದ ಭಾರತ ಮಂತ್ರಿಗೂ (ಸೆಕ್ರೆಟರಿ ಆಫ್ ಸ್ಟೇಟ್ ಫಾರ್ ಇಂಡಿಯ) ಮನವಿಗಳೂ ನಿಯೋಗಗಳೂ ಹೋದವು. ಭಾರತೀಯರಾದರೂ ಸುಮ್ಮನಿರಲಿಲ್ಲ. ಬಿಳಿಯರ ಈ ಆಂದೋಲನವನ್ನು ಪ್ರತಿಭಟಿಸಿದರು. ಆಂಗ್ಲೋ-ಇಂಡಿಯನ್ ಪತ್ರಿಕೆಗಳು ಈ ವಿಧೇಯಕವನ್ನು ಖಂಡಿಸಿಯೂ ರಾಷ್ಟ್ರೀಯ ಪತ್ರಿಕೆಗಳು ಇದನ್ನು ಸಮರ್ಥಿಸಿಯೂ ಲೇಖನಗಳನ್ನೂ ಸಂಪಾದಕೀಯವನ್ನೂ ಪ್ರಕಟಿಸಿದವು.

ಇಂಗ್ಲೆಂಡಿನಲ್ಲಿ ಆಗ ಅಧಿಕಾರದಲ್ಲಿದ್ದ ಲಿಬರಲ್ ಪಕ್ಷ ಇಲ್ಬರ್ಟ್‍ವಿಧೇಯಕದ ಪರವಾಗಿತ್ತು. ಈ ಭೇದಭಾವವನ್ನು ಇನ್ನೂ ಮುಂದುವರಿಸಿದರೆ ಭಾರತದ ಜನರಲ್ಲಿ ಅತೃಪ್ತಿ ಹೆಚ್ಚೀತು, ರಾಜದ್ರೋಹಾತ್ಮಕ ಚಳವಳಿಯತ್ತ ಅವರ ಮನಸ್ಸು ಹರಿದೀತು ಎಂದು ಜಾನ್ ಬ್ರೈಟ್ ಅಭಿಪ್ರಾಯಪಟ್ಟ. ಆಗ ಭಾರತದ ವೈಸ್‍ರಾಯಿಯಾಗಿದ್ದ ಲಾರ್ಡ್ ರಿಪನ್ ಕೂಡ ಈ ವಿಧೇಯಕದ ಪರವಾಗಿದ್ದ. ಋುಜುಮಾರ್ಗ, ಧರ್ಮನಿಷ್ಠೆಗಳೇ ರಾಷ್ಟ್ರೋನ್ನತಿಯ ಸಾಧನೆಗಳೆಂಬ ಧ್ಯೇಯವಾಕ್ಯದಲ್ಲಿ ಆತನಿಗೆ ಅಚಲವಾದ ನಂಬುಗೆ. ಸಾಮ್ರಾಜ್ಯ ಕಟ್ಟುವುದಕ್ಕೆ ಸೈನಿಕರ ಧೈರ್ಯಸ್ಥೈರ್ಯಗಳು ಮಾತ್ರವೇ ಸಾಲದು; ನೀತಿಯೂ ಧರ್ಮವೂ ನ್ಯಾಯಕಟ್ಟಳೆಗಳೂ ಒಂದು ಸಾಮ್ರಾಜ್ಯದ ಆಧಾರಸ್ತಂಭಗಳು. ಇತಿಹಾಸದಿಂದ ಈ ಪಾಠ ಕಲಿತಿದ್ದ ಲಾರ್ಡ್ ರಿಪನ್ ಈ ಮಸೂದೆಯನ್ನು ಮನಃಪೂರ್ವಕವಾಗಿ ಸಮರ್ಥಿಸಿದ.

ಆದರೆ ಬ್ರಿಟಿಷ್ ಹಿತಾಸಕ್ತಿಗಳ ಪ್ರಬಲ ಪ್ರಚಾರದಿಂದಲೂ ಒತ್ತಾಯದಿಂದಲೂ ಈ ವಿಧೇಯಕದ ಬದಲು ಅಷ್ಟು ತೀವ್ರವಲ್ಲದ ಇನ್ನೊಂದು ವಿಧೇಯಕ 1884ರಲ್ಲಿ ಕಾಯಿದೆಯಾಗಿ ಜಾರಿಗೆ ಬಂತು. ಭಾರತೀಯ ಜಿಲ್ಲಾ ನ್ಯಾಯಾಧೀಶರು ಹಾಗೂ ಸತ್ರ (ಸೆಷನ್ಸ್) ನ್ಯಾಯಾಧೀಶರು ಯೂರೋಪಿಯನ್ ಬ್ರಿಟಿಷ್ ಪ್ರಜೆಗಳ ವಿಚಾರಣೆಯನ್ನೂ ನಡೆಸಬಹುದೆಂಬುದು ಈ ಕಾಯಿದೆಯ ಮುಖ್ಯಾಂಶ.

ಇಲ್ಬರ್ಟ್ ವಿಧೇಯಕದ ವಿರುದ್ಧವಾದ ಚಳವಳಿಯ ವಿಜಯದಿಂದ ಭಾರತೀಯರ ಅಭಿಮಾನಕ್ಕೆ ಬರೆ ಬಿದ್ದ ಹಾಗಾಯ್ತು. ಆದರೆ ಒಗ್ಗಟ್ಟು ಸಂಘಟನೆಗಳಿಂದ ಎಷ್ಟರ ಮಟ್ಟಿಗೆ ಉದ್ದೇಶ ಸಾಧನೆಯಾದೀತೆಂಬುದನ್ನು ಭಾರತೀಯ ವಿದ್ಯಾವಂತರಿಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ಇದೂ ಒಂದು ಅe್ಞÁತ ವರಪ್ರಸಾದವೆಂದೇ ಹೇಳಬಹುದು.	
(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ